ನಾನು ಯಾವಾಗಲೂ ಓದುತ್ತೇನೆ.ಶಾರ್ಕ್‌ಗಳು ಈಜುತ್ತಲೇ ಇರುತ್ತವೆ, ಇಲ್ಲವಾದಲ್ಲಿ ಅವು ಸಾಯುತ್ತವೆ ಎಂಬುದು ನಿಮಗೆ ತಿಳಿದಿದೆಯೇ? ನಾನೂ ಕೂಡ ಹಾಗೆ. ಓದುವುದನ್ನು ನಿಲ್ಲಿಸಿದರೆ ಸಾಯುತ್ತೇನೆ... -- ಪ್ಯಾಟ್ರಿಕ್ ರೋಫಸ್

Friday 22 September 2023

ಅಂದು ಬರೆದ ಲೇಖನ ಇಂದು ಕನಸಾಗಿದೆ..

ಸ್ಮಾರ್ಟ್ ಕ್ಲಾಸ್ ಹೊಂದುವ ಬಗ್ಗೆ ಸುಮಾರು ವರ್ಷಗಳ  ಕನಸನ್ನೊಮ್ಮೆ ಪತ್ರಿಕೆಯಲ್ಲಿ ಹಂಚಿಕೊಂಡಿದ್ದೆ.. ಇಂದು ಆ ಕನಸು ನನಸಾಗಿದೆ. ಇಂದಿನ ನಮ್ಮ ತರಗತಿಗಳೆಲ್ಲ ಸ್ಮಾರ್ಟ್‌ ಕ್ಲಾಸ್‌ಗಳಾಗಿವೆ.. ಆ ಹಳೆಯ ಲೇಖನ ತಮಗಾಗಿ.. ಅಳವಡಿಕೆ‌ ವಿಧಾನ ಬೇರೆ ಅಷ್ಟೇ..

ಮತ್ತೊಮ್ಮೆ ನಮ್ಮ ಸಂವಿಧಾನವನ್ನು ನಮಗೆ ನಾವೇ ಅರ್ಪಿಸಿಕೊಂಡು....

ಸಪ್ಟೆಂಬರ್ 15 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ನಮ್ಮ ಸರ್ಕಾರಿ ಪ್ರೌಢಶಾಲೆ ಕೋಳಕೂರನಲ್ಲಿ ಎಲ್ಲ ಶಿಕ್ಷಕರು ವಿದ್ಯಾರ್ಥಿಗಳು ಸೇರಿ ನಮ್ಮ ಭಾರತದ ಸಂವಿಧಾನದ ಪೀಠಿಕೆಯನ್ನು ಸಾಮೂಹಿಕವಾಗಿ ಓದಿದರು. ಹೀಗೆ ಸಂವಿಧಾನದ ಪ್ರಸ್ತಾವನೆಯನ್ನು ಓದುವುದರಿಂದ ಏನು ತಿಳಿಯುತ್ತದೆ ಎಂಬ ವಿದ್ಯಾರ್ಥಿಯೊಬ್ಬನ ಪ್ರಶ್ನೆಗೆ ಮುಖ್ಯ ಗುರುಗಳಾದ ಶ್ರೀ ಮುಕುಂದ ಕುಲಕರ್ಣಿಯವರು ಸಂವಿಧಾನದ ಪೀಠಿಕೆಯಲ್ಲಿ ಇಡೀ ಸಂವಿಧಾನದ ಆಶಯವು ಅಡಗಿದೆ, ಒಂದು ದೇಶಕ್ಕೆ ಬೇಕಾಗಿರುವಂತಹ ಸುದೀರ್ಘವಾದ ಹಾಗೂ ಸಶಕ್ತವಾದ ಗುರಿಗಳು ಏಕತೆ, ಸಮಾನತೆ, ನ್ಯಾಯ ಹೀಗೆ ಪ್ರಮುಖವಾಗಿರ್ತಕ್ಕಂತ ಅಂಶಗಳು ಮನದಟ್ಟಾಗುತ್ತವೆ ಎಂದು ತಿಳಿಸಿದರು. ಕಳೆದ ಆಗಸ್ಟ್‌ನಿಂದಲೇ ನಮ್ಮ ಶಾಲೆಯಲ್ಲಿ ಶಾಲಾ ಪ್ರಾರ್ಥನೆಯ ಬಳಿಕ ಸಾಮೂಹಿಕವಾಗಿ ಸಂವಿಧಾನದ ಪೀಠಿಕೆಯ ಓದು ನಡೆಯುತ್ತಿದೆ.

ಗೆಳೆಯನ ಲ್ಯಾಬ್ ಶಿಕ್ಷಣ ವಾರ್ತೆಯಲ್ಲಿ...

ಜೂನ್ ತಿಂಗಳ ಶಿಕ್ಷಣ ವಾರ್ತೆಯಲ್ಲಿ ಅದ್ಭುತ ವಿಜ್ಞಾನ ಪ್ರಯೋಗಾಲಯದ ಬಗ್ಗೆ ಹಾಗೂ ಉತ್ತಮ ಶಾಲಾ ಪರಿಸರವನ್ನು ಹೊಂದಿರುವ ಶಾಲೆಯ ಬಗ್ಗೆ ಲೇಖನ ಪ್ರಕಟವಾಗಿರುವುದನ್ನು ತಾವು ಗಮನಿಸಬಹುದು. ಇದು ನನ್ನ ಗೆಳೆಯನಾದ ಪ್ರೇಮಕುಮಾರ ಢವಳಗಿ ಅವರ ಶಾಲೆ. ಪ್ರೇಮ್ ಕುಮಾರ ಢವಳಗಿ ನನ್ನ ಹೈಸ್ಕೂಲ್ ಗೆಳೆಯ. ಪ್ರಸ್ತುತ ವಿಜಯಪುರದ ಬಸವನ ಬಾಗೇವಾಡಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಉಪಕಡ್ಡಿಯಲ್ಲಿ ವಿಜ್ಞಾನ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಶಾಲೆಯಲ್ಲಿ ಸಜ್ಜುಗೊಳಿಸಿದ ವಿಜ್ಞಾನ ಪ್ರಯೋಗಾಲಯವು ರಾಜ್ಯಕ್ಕೆ ಮಾದರಿಯಾಗುವಂತದ್ದು. ಸೂಕ್ತ ರೀತಿಯ ಮಾದರಿಗಳ ಜೋಡಣೆ ವೈಜ್ಞಾನಿಕ ಚಿತ್ರ ಬರಹಗಳು ಹಾಗೂ ಸುಸಜ್ಜಿತವಾದ ಪ್ರೊ ಪ್ರೊಜೆಕ್ಟರ್ ಸಹಿತವಾದ ಕೋಣೆ ಎಲ್ಲವೂ ವಿದ್ಯಾರ್ಥಿಗಳನ್ನು ಕಲಿಕೆಯತ್ತ ಆಕರ್ಷಿಸುತ್ತದೆ. ಪ್ರೇಮಕುಮಾರ್  ಅವರು ತಮ್ಮ ಪಾಠ ಭೋದನೆಯ ಜೊತೆಗೆ ತಮ್ಮ ಪ್ರಯೋಗಾಲಯದಲ್ಲಿ ವಿದ್ಯಾರ್ಥಿಗಳಿಂದಲೇ ಪಠ್ಯದಲ್ಲಿನ ಪ್ರಯೋಗಗಳನ್ನು ಮಾಡಿಸುತ್ತಾರೆ. ಇದರಿಂದ ಪ್ರಭಾವಿತನದ ನಾನು ನನ್ನ ಶಾಲೆಯಲ್ಲೂ ಸಹ ಒಂದು ವಿಜ್ಞಾನ ಪ್ರಯೋಗಾಲಯವನ್ನು ಸಜ್ಜುಗೊಳಿಸಲು ಮನಸ್ಸು ಮಾಡಿದ್ದೇನೆ. ನನ್ನ ಒಂದು ಕವಿತೆ ಕೂಡ ಅದೇ‌ ಸಂಚಿಕೆಯಲ್ಲಿ ಪ್ರಕಟಗೊಂಡಿದ್ದು ಖುಷಿ ನೀಡಿತು.

ತಾಲೂಕಾ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆ 2022-23

ತಾಲೂಕಾ ಮಟ್ಟದ ವಿಜ್ಞಾನ ವಿಚಾರ ಗೋಷ್ಠಿ ಮತ್ತು ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಭಾಗವಹಿಸಿ ಪ್ರಥಮ‌ ಸ್ಥಾನ ಪಡೆದರು

Friday 20 November 2020

ಶೈಕ್ಷಣಿಕ ಕಾರ್ಯಾಗಾರ ಕಲಬುರಗಿ

 ಕೊವಿಡ್ 19 ರಂತಹ ಪ್ಯಾಂಡೆಮಿಕ್ ಸಂದರ್ಭದಲ್ಲಿ ಶಾಲೆಗಳ ಪ್ರಾರಂಭ ಕನಸಾಗೇ ಉಳಿಯುತು.ಏತನ್ಮಧ್ಯೆ  ಕಲಬುರಗಿ ವಿಭಾಗದಲ್ಲಿ ಸಾಕಷ್ಟು ಶೈಕ್ಷಣಿಕ ಚಟುವಟಿಕೆಗಳು ನಡೆದವು. ಎಪ್ರಿಲ್ ಮಧ್ಯಭಾಗದಲ್ಲಿ ಮಾನ್ಯ ಅಪರ ಆಯುಕ್ತರಾದ‌ ಶ್ರೀ ನಳಿನ್ ಅತುಲ್ ಅವರು ತಮ್ಮ ನಿರ್ದೇಶಕ ಹಂತದ ಅಧಿಕಾರಗಳ ಜತೆ ಸೇರಿ ಸೇತು ಬಂಧ ಕೈಪಿಡಿ, ಪ್ರಯೋಗ ದರ್ಪಣ ಎಂಬ ಪ್ರಯೋಗಾಲಯ ಕೈಪಿಡಿ ಸೇರಿದಂತೆ ಮನೆಯಿಂದಲೇ ಕೆಲಸ ಎಂಬಿತ್ಯಾದಿ ಚಟುವಟಿಕೆಗಳನ್ನು ನೀಡಿದ್ದರು.

ಮೊದಲ ಹಂತದಲ್ಲಿ ಆರು ಚಟುವಟಿಕೆಗಳನ್ನು ವರ್ಕ್ ಫ್ರಾಮ್ ಹೋಮ್  ಅಡಿಯಲ್ಲಿ ನೀಡಿದರು. ಅವು ಹೀಗಿವೆ.

1. ಶಾಲಾಭಿವೃದ್ಧಿ ಯೋಜನೆ

2. ಶೈಕ್ಷಣಿಕ ಲೇಖನ

3. ಕನಿಷ್ಠ 2ಪುಸ್ತಕಗಳನ್ನು ಓದಿ ವಿಮರ್ಶಿಸುವುದು.

4. ವ್ಯಕ್ತಿ ಅಧ್ಯಯನ

5. ಕೃತಿ ಸಂಪುಟ

6. ಇ ಕಂಟೆಂಟ್


ಇದಾದ ಬಳಿಕ ಮತ್ತೇ ಲಾಕ್ ಡೌನ್ ಮುಂದುವರೆದಾಗ 10 ಚಟುವಟಿಕೆಗಳನ್ನು ನೀಡಿದರು. ಅವು ಹೀಗಿವೆ.

1. ಆಡಿಯೋ/ವಿಡಿಯೋ ಪಾಠ

2. ಘಟಕ ಯೋಜನೆ ತಯಾರಿ

3. ಪಾಲಕರೊಂದಿಗೆ ಸಮಾಲೋಚನೆ

4. ಕಲಿಕೋಪಕರಣಗಳ ತಯಾರಿ

5. ಯ್ಯೂ ಟ್ಯೂಬ್ ನಲ್ಲಿ ವಿವಿಧ ಶೈಕ್ಷಣಿಕ ವಿಡಿಯೋ ವೀಕ್ಷಿಸಿ ವಿಮರ್ಶೆ ಬರೆಯುವುದು.

6. ಸಹೋದ್ಯೋಗಿಗಳೊಂದಿಗೆ ಸಮಾಲೋಚನೆ

7. ಸೇತುಬಂಧ

8. ಕ್ಷಿಜ್ ಬ್ಯಾಂಕ್

9. ವೃತ್ತಿನೈಪುಣ್ಯತೆ

10. ಕೋವಿಡ್ ಕಾರ್ಯತಂತ್ರಗಳು

ಹೀಗೆ ಇವುಗಳಲ್ಲಿ ಚಟುವಟಿಕೆಗಳನ್ನು ನಿರ್ವಹಿಸಿ ಅವುಗಳನ್ನು ಶಿಕ್ಷಕರ ವೈಯಕ್ತಿಕ ಬ್ಲಾಗ್ ರಚಿಸಿ ಅಪ್ ಲೋಡ್ ಮಾಡಲು ಸೂಚಿಸಿದ್ದರು. ಅದರಂತೆ ಕಲಬುರಗಿ ವಿಭಾಗದ ಎಲ್ಲ ಶಿಕ್ಷಕರು ಬ್ಲಾಗ್ ರಚಿಸಿ ತಮಗೆ ನೀಡಿದ ಎಲ್ಲ ಚಟುವಟಿಕೆಗಳನ್ನು ಯಶಸ್ವಿಯಾಗಿ ಪೂರೈಸಿ ಬ್ಲಾಗ್ ನಲ್ಲಿ ಅಪ್‌ಲೋಡ್ ಕೂಡ ಮಾಡಿದರು. ಇದರಲ್ಲಿ ಉತ್ತಮವಾಗು ಚಟುವಟಿಕೆಗಳನ್ನು ನಿರ್ವಹಿಸಿದ ಶಿಕ್ಷಕರಿಗೆ ದಿ.19/11/2020 ರಂದು ನಡೆದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶ ನೀಡಿ ಮತ್ತೇ ಆರು ಚಟುವಟಿಕೆಗಳ ಬಗ್ಗೆ ಅನುಭವ ಹಂಚಿಕೆ ಮಾಡಿಕೊಂಡು ಒಂದು ಸ್ಪಷ್ಟ ಕರಡನ್ನು ರಚುಸಲು ಮಾನ್ಯ ಆಯುಕ್ತರು ಹಾಗೂ ಅಜೀಂ‌ಪ್ರೇಂ‌ಜೀ ಫೌಂಡೇಷನ್ ನ ಜಿಲ್ಲಾ ಸಂಯೋಜಕರು ಸೂಚಿಸಿದರು. ಅದರಂತೆ ಇಲ್ಲಿ ಭಾಗವಹಿಸಿದ ಸಂಪನ್ಮೂಲ ಶಿಕ್ಷಕರು,

1. ಪಾಠಯೋಜನೆ

2. ಶಾಲಾಭಿವೃದ್ಧಿ ಯೋಜನೆ ಮತ್ತು ಸಮುದಾಯ ಸಹಭಾಗಿತ್ವ

3. ಅಂತರ್ಗತ ಕಲಿಕೆ

4. ಶಾಲೆಯಿಂದ ಹೊರಗುಳಿದ ಮಕ್ಕಳು

5. ಇ ತಂತ್ರಜ್ಞಾನ

6. ಎನ್ ಇ ಪಿ ಕುರಿತ ಚರ್ಚೆ


ಈ ವಿಷಯಗಳ ಕುರಿತು ಚರ್ಚಿಸಿ ವಿಷಯ ಮಂಡನೆ ಮಾಡಿದರು. ಬಳಿಕ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಹಂತದಲ್ಲಿ  ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾದ ಶಿಕ್ಷಕರಿಗೆ ಹಾಗೂ ವರ್ಕ್ ಫ್ರಾಂ ಹೋಮ್ ಅಡಿಯಲ್ಲಿ ಉತ್ತಮ ಚಟುವಟಿಕೆಗಳನ್ನು ನಿರ್ವಹಿಸಿದ ಶಿಕ್ಷಕರಿಗೆ ಮಾನ್ಯ ಅಪರ ಆಯುಕ್ತರು ಪ್ರಶಂಸಾ ಪತ್ರ ನೀಡಿ ಸನ್ಮಾನಿಸಿದರು.






Thursday 19 November 2020

ಶಾಲಾ ಶೌಚಾಲಯ ಜೀರ್ಣೋದ್ಧಾರ

'ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ' ಎನ್ನುವ ಹಾಗೇ ಲಾಕ್ ಡೌನ್ ಮುಗಿದರೂ ಶಾಲಾರಂಭವಾಗಲೇ ಇಲ್ಲ. ವಿದ್ಯಾಗಮ ಸಲೀಸಾಗಿ ನಡೆದಿತ್ತಾದರೂ ಕೊರೋನಾ ಅಲ್ಲಲ್ಲಿ ಶಿಕ್ಷಕರನ್ನು ಬಲಿ ಪಡೆದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ಕಾರಣ ವಿದ್ಯಾಗಮ ಕೂಡ ಸ್ಥಗಿತಗೊಂಡಿತು. ಈ ಮಧ್ಯೆ ದಸರೆಯ ರಜೆ ಬಂದು ಹೋಯಿತು. ಆದರೂ ಶಾಲಾರಂಭದ ಸುಳಿವೇ ಇಲ್ಲ.. 

ಈ ಮಧ್ಯೆ ನಮ್ಮ‌ಶಾಲೆಯಲ್ಲಿ ಸುಮಾರು ವರ್ಷಗಳಿಂದ  ನಾನ್ ಫಂಕ್ಷನಲ್ ಆಗಿದ್ದ ಬಾಲಕರ ಶೌಚಾಲಯವನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಂಡೆವು. ನವೆಂಬರ್ 1 ರಿಂದ ಶುರುಮಾಡಿ ಇಲ್ಲಿಯವರೆಗೆ ಅಷ್ಟಿಷ್ಟು ಸ್ವಚ್ಛಗೊಳಿಸಿ ಬಳಕೆಗೆ ಲಭ್ಯವಾಗುವಂತೆ ಮಾಡಿದೆವು. ಇದರಲ್ಲಿ ನಮ್ಮ‌ಶಾಲಾ ಸಹಶಿಕ್ಷಕರ ಸಹಕಾರ ಮರೆಯುವುದೆಂತು. ಪ್ಯಾಚಿಂಗ್,ಪೇಂಟಿಂಗ್ ಮತ್ತು ಪ್ಲಂಬಿಂಗ್ ಬಾಕಿ ಇವೆ..ಸದ್ಯಕ್ಕಿಷ್ಟು..

ಮೊದಲು...





ನಂತರ...






Tuesday 11 August 2020

'ವಿದ್ಯಾಗಮ' ನಿರಂತರ ಕಲಿಕಾ ಯೋಜನೆ 2020-21



 

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬಿ.ಬಿ.ರಸ್ತೆ ಜೇವರ್ಗಿ 
ಜೇವರ್ಗಿಯ ಗಾಂಧೀ ನಗರದಲ್ಲಿನ 1-7 ತರಗತಿಗಳ ವಿದ್ಯಾರ್ಥಿಗಳನ್ನು 1-5, 6-8 ಗುಂಪುಗಳಾಗಿಸಿ ವಿವಿಧ ಚಟುವಟಿಕೆಗಳನ್ನು ಪೂರೈಸಲು ಸೂಚಿಸಲಾಯಿತು. 
ಪಾಲಕರಿಂದ ಉತ್ತಮ ಪ್ರತಿಕ್ರಿಯೆ ಬಂದಿತು. 24 ಮಕ್ಕಳಲ್ಲಿ ಇಂದು 13 ಮಕ್ಕಳು ಹಾಜರಾಗಿದ್ದು, ಕೊವಿಡ್ 19 ಕುರಿತು ಜಾಗೃತಿ ಮೂಡಿಸಿ ನಂತರ ಶೈಕ್ಷಣಿಕ ಚಟುವಟಿಕೆಗಳನ್ನು ನೀಡಲಾಯಿತು.